ಪ್ರಾಯೋಗಿಕ ಮನೋವಿಜ್ಞಾನ
	ವೈಜ್ಞಾನಿಕ ಪ್ರಯೋಗಗಳ ಆಧಾರದ ಮೇಲೆ ಬೆಳೆದಿರುವ ಮನಶ್ಯಾಸ್ತ್ರ. (ಎಕ್ಸ್‍ಪರಿಮೆಂಟಲ್ ಸೈಕಾಲಜಿ). ಅಧ್ಯಾತ್ಮಶಾಸ್ತ್ರದ ಊಹಾಪೋಹಗಳನ್ನು ನಿರಾಕರಿಸಿ, ಅನುಭವನಿಷ್ಠ ಸತ್ಯಾಂಶಗಳನ್ನೆ ಹೆಚ್ಚು ಹೆಚ್ಚು ಅವಲಂಬಿಸಿ ಪ್ರಕೃತಿ ವಿಜ್ಞಾನಗಳು ಬೆಳೆದು ಬಂದಿವೆ. ಈ ಅನುಭವಮಾರ್ಗ ಮಹತ್ತ್ವಪೂರ್ಣ ಪ್ರಗತಿಯನ್ನು ಸಾಧಿಸುವುದರಲ್ಲಿ ವಿಜ್ಞಾನಕ್ಕೆ ಚೇತನದಾಯಿಯಾಯಿತು. ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಉಪಯೋಗಿಸಲಾಗುವ ವೈಜ್ಞಾನಿಕ ವಿಧಾನದಲ್ಲಿ ಫಲಿತಾಂಶಗಳ ವಸ್ತುನಿಷ್ಠತೆ ಮತ್ತು ಪ್ರಯೋಗಗಳ ಪುನರಾವೃತ್ತಿಗಳನ್ನು, ವೀಕ್ಷಣೆ ಮತ್ತು ವಿಧಿವತ್ತಾದ ಪ್ರಯೋಗಗಳು ಕಾಯುತ್ತವೆ. 
	ಪ್ರಾಯೋಗಿಕ ಸಂಪ್ರದಾಯ ಮನೋವಿಜ್ಞಾನದಲ್ಲಿ ಎಂದು ಪ್ರಾರಂಭವಾಯಿತು ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಪ್ರಾಯೋಗಿಕ ಆವಶ್ಯಕತೆಗಳ ಸಮಗ್ರದೃಷ್ಟಿಯಿಂದ 1879ರಲ್ಲಿ ವಿಲ್‍ಹೆಮ್‍ವೂಂಟ್, ಜರ್ಮನಿಯ ಲೈಪ್‍ಜಿಗ್‍ನಲ್ಲಿ ಪ್ರಥಮ ಮನೋವೈಜ್ಞಾನಿಕ ಪ್ರಯೋಗಾಲಯವನ್ನು ಸ್ಥಾಪಿಸಿದಾಗ, ಆ ಸಂಪ್ರದಾಯ ಪ್ರಾರಂಭವಾಯಿತೆಂದು ಹೇಳಿದಾಗ್ಯೂ, ಅದಕ್ಕೂ ಮುಂಚೆ ಅಲ್ಲಿ-ಇಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮನೋವಿಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಪ್ರಯೋಗಗಳು ನಡೆಯುತ್ತಿದ್ದವು. ಅವುಗಳಲ್ಲಿ ಮುಂದೆ ಹೇಳಿರುವ ಪ್ರಯೋಗಗಳು ಗಣನೀಯವಾಗಿವೆ. ಗಣಿತಶಾಸ್ತ್ರಜ್ಞನಾದ ವೆಬರ್ (1834) ಇಂದ್ರಿಯಾನುಭವಕ್ಕೆ ಸಂಬಂಧಿಸಿದ ತತ್ತ್ವಗಳನ್ನು ರೂಪಿಸಿದ. ಗಣಿತಶಾಸ್ತ್ರಜ್ಞನೂ ಭೌತಶಾಸ್ತ್ರಜ್ಞನೂ ಆಗಿದ್ದ ಫೆಕ್‍ನರ್ (1860) ಸೌಂದರ್ಯ ಅಭಿರುಚಿಗಳಿಗೆ ಸಂಬಂಧಿಸಿದ ತತ್ತ್ವಗಳನ್ನು ರಚಿಸಿದ. ಭೌತ ಮತ್ತು ಶರೀರಶಾಸ್ತ್ರಜ್ಞನಾಗಿದ್ದ ಫಾನ್ ಹೇಲ್ಮ್ ಹೋಲ್ಟ್ಸ್ (1850) ದೃಷ್ಟಿ ಮತ್ತು ಶ್ರವಣಾನುಭವಗಳ ನೆಲೆಯನ್ನು ರೂಪಿಸಿದ. ಶರೀರ ಶಾಸ್ತ್ರಜ್ಞನಾದ ಹೆರಿಂಗ್ (1861) ದೇಶ-ಪ್ರತ್ಯಕ್ಷಾನುಭವ ಪರಿಶೀಲನೆಯನ್ನು ನಡೆಸಿದ. ತರ್ಕಶಾಸ್ತ್ರಜ್ಞನಾದ ಜೆವನ್ಸ್ (1871) ಅವಧಾನದ ವಿಸ್ತಾರದ ಮೇಲೆ ಸರಳ ಪ್ರಯೋಗಗಳನ್ನು ನಡೆಸಿದ.
	ಯಾವುದೇ ಸಂಶೋಧನೆ ಕ್ಷೇತ್ರದಲ್ಲೇ ಆಗಲಿ, ಪ್ರಯೋಗಕ್ಕೆ ಪೂರ್ವಭಾವಿಯಾಗಿ, ಅಧ್ಯಯನ ವಿಷಯವನ್ನು ಕಾರ್ಯಾತ್ಮಕ ಪರಿವತ್ರ್ಯಗಳ ಆಧಾರದ ಮೇಲೆ ಸ್ಪಷ್ಟವಾಗಿ ವಿವರಿಸಬೇಕು. ಅಧ್ಯಯನದ ವಸ್ತುವರ್ತನೆ ಆಗಿರುವುದರಿಂದ, ಅನುಕ್ರಿಯೆಗಳು ವರ್ತನೆಯ ಅಂಶಗಳೆಂದು ಪರಿಗಣಿತವಾಗುತ್ತವೆ. ಪ್ರಾಯೋಗಿಕ ಮನೋವಿಜ್ಞಾನ ತನ್ನ ಮುಂದಿಟ್ಟುಕೊಳ್ಳುವ ಸೈದ್ಧಾಂತಿಕ ಮಾದರಿ ಒಂದು ಸಮೀಕರಣ ರೂಪದಲ್ಲಿ ವಿವರಿಸಲ್ಪಟ್ಟಿವೆ. ಅ = ಕ್ರಿ (ಉ. ಜೀ) [].ಅಂದರೆ `ಅ ಅನುಕ್ರಿಯೆ `ಉ ಉದ್ದೀಪಕ ಮತ್ತು `ಜೀ ಜೀವಿಯ ಸ್ಥಿತಿ. ಇವುಗಳ `ಕ್ರಿ ಕ್ರಿಯೆ. ಉದ್ದೀಪಕ ಸಾಮಾನ್ಯವಾಗಿ ಜೀವಿಯ ಮೇಲೆ ಪ್ರಯೋಗಿಸಲಾದ ಒಂದು ಹೊರಗಿನ ಭಾಷಾತ್ಮಕ ಅಥವಾ ಭೌತಿಕ ನಿಯೋಗಿ (ಶಕ್ತಿ) ಆಗಿರುತ್ತದೆ. ವಿಪುಲವಾಗಿ ವ್ಯಾಪಿಸಿರುವ ಉದ್ದೀಪಕಗಳ ಸಮೂಹದಿಂದ ವಿವಿಧ ರೂಪದ ಉದ್ದೀಪಕಗಳನ್ನು ಆರಿಸಿಕೊಳ್ಳುವುದರ ಮೂಲಕ `ಉ ನಲ್ಲಿ ಪರಿವರ್ತನೆಗಳನ್ನು ಉಂಟುಮಾಡಲಾಗುತ್ತದೆ. ಹೇರಳವಾಗಿ ದೊರೆಯುವ ವಿವಿಧ ಉದ್ದೀಪಕಗಳೆಂದರೆ: ವಿವಿಧ ಇಂದ್ರಿಯಗಳ ಉದ್ದೀಪಕ ವಸ್ತುಗಳಾದ ವರ್ಣಗಳು, ವಾಸನೆಗಳು, ರುಚಿಗಳು ಇತ್ಯಾದಿ; ರಾಸಾಯನಿಕ ಮತ್ತು ವಿದ್ಯುತ್ ಉದ್ದೀಪಕಗಳು; ಸಾಮಾಜಿಕ ಸನ್ನಿವೇಶಗಳು, ಪ್ರಸಕ್ತ ಸಮಸ್ಯೆಯನ್ನು ಬಿಡಿಸುವ ಮತ್ತು ಕಲಿಯುವಂಥ ಕ್ಲಿಷ್ಟ ಸನ್ನಿವೇಶಗಳು-ಇವೇ ಮುಂತಾದವು. ಮೂಲತಃ `ಜೀ ತತ್ ಸಮಯದಲ್ಲಿರುವ ಜೀವಿ. ಅದು ಆನುವಂಶೀಕ ಪ್ರವೃತ್ತಿಗಳು. ಬೆಳವಣಿಗೆ ಮತ್ತು ಪರಿಸರಗಳ (ಪ್ರಾಣಿಗಳಲ್ಲಿ) ಮತ್ತು ಸಂಸ್ಕøತಿಯ (ಮನುಷ್ಯರಲ್ಲಿ) ಸಿದ್ದವಸ್ತು. ಪ್ರಯೋಗವೊಂದರಲ್ಲಿ, ವರ್ತನೆ ಪರಿಣಾಮಗಳನ್ನು ವ್ಯಕ್ತಪಡಿಸುವ ಅವಲಂಬಿ ಪರಿವತ್ರ್ಯವಾದರೆ `ಉ ಅಥವಾ `ಜೀ ಅಥವಾ ಇವೆರಡೂ ಸ್ವತಂತ್ರ ಪರಿವತ್ರ್ಯಗಳಾಗಿರುತ್ತವೆ. ಅಂದ ಮೇಲೆ `ಜೀ ಕೂಡ ಪರಿವರ್ತನೆಗೆ ಒಳಗಾಗುತ್ತದೆ. ಜೀವಾತ್ಮಕವಾಗಿ ವಿವಿಧ ರಚನೆಯಿಂದ ಕೂಡಿದ `ಜೀಗಳು ಅಥವಾ ವಿವಿಧ ವಯಸ್ಸಿನ (ವೃದ್ಧಿ ಪರಿವರ್ತನ)`ಜೀ ಗಳು ಅಥವಾ ವಿವಿಧ ಸಂಸ್ಕøತಿಯಿಂದ ಬಂದ `ಜೀಗಳು-ಇವನ್ನು ಪರಿಶೀಲನಕ್ಕೆ ತೆಗೆದುಕೊಳ್ಳಬಹುದು. ಕೆಲವು ವೇಳೆ, ಪ್ರಾಯೋಗಿಕ ಉದ್ದೇಶಗಳಿಗಾಗಿ, `ಜೀಯ ಸ್ಥಿತಿಯನ್ನು ಪ್ರಯತ್ನಪೂರ್ವಕವಾಗಿ ಬದಲಾಯಿಸಬಹುದು. ಅದಕ್ಕಾಗಿ ಪ್ರಯೋಗ ಪೂರ್ವಭಾವಿಯಾಗಿ ಅದನ್ನು, ಇತರ ಅನುಭವಗಳಿಗೆ ಅಂದರೆ ಕಲಿಕೆ ಆಯಾಸ ಹಸಿವು ಇತ್ಯಾದಿ ಅಥವಾ ಭೌತಿಕ ನಿಯೋಗಿಗಳಾದ ಮದ್ದುಗಳು ಷಾಕ್‍ಗಳು ಗದ್ದಲ ಇತ್ಯಾದಿ ಅಥವಾ ಯಾವುದೊ ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ಸೂಚನೆ ಕೊಡುವುದು ಅಥವಾ ಒಂದು ಬಹುಮಾನದ ಆಶ್ವಾಸನೆ ಕೊಡುವುದು ಅಥವಾ ಶಿಕ್ಷೆಯ ಹೆದರಿಕೆ ಮೊದಲಾದವುಗಳಿಗೆ ಅಧೀನ ಪಡಿಸುವುದು `ಉ ಪರಿವತ್ರ್ಯಗಳು ವಿವಿಧ ರೀತಿಯಲ್ಲಿ ಅಥವಾ ವಿಧಿತಕ್ರಮದಲ್ಲಿ ಪರಿವರ್ತನೆಯಾಗುವುದು ಮಾತ್ರವಲ್ಲದೆ ಪ್ರತಿಯೊಂದು ವಿಧಿತಕ್ರಮದಲ್ಲಿಯೂ ಪರಿಮಾಣ ಆಧಿಕ್ಯ, ವಿಸ್ತಾರ ಮತ್ತು ಅವಧಿಗಳಲ್ಲೂ ಭೌತಿಕವಾಗಿ ಪರಿವರ್ತನೆಯಾಗುತ್ತವೆ. ಆದ್ದರಿಂದ ಮನೋವಿಜ್ಞಾನದಲ್ಲಿ, ಪ್ರಯೋಗಕರ್ತ (ಪ್ರ) ವರ್ತನೆಯ ಮೇಲೆ ಸ್ವತಂತ್ರ ಪರಿವತ್ರ್ಯಗಳ ಪ್ರಭಾವವನ್ನು ಒಂಟಿಯಾಗಿಯಾಗಲಿ ಜೊತೆಯಾಗಿಯಾಗಲಿ ಅಧ್ಯಯನ ಮಾಡಲು ಅವುಗಳ ಒಂದು ದೊಡ್ಡ ಬಂಡವಾಳವನ್ನೆ ಹೊಂದಿರುತ್ತಾನೆ.
	ಮನೋವಿಜ್ಞಾನದಲ್ಲಿನ ಪ್ರಯೋಗಗಳು ಕೂಡ ಬೇರಡೆಯಲ್ಲಿರುವಂತೆಯೆ ಮಿಲ್ ನಿರೂಪಿಸಿರುವ ಸಾಮಾನ್ಯ ತಾರ್ಕಿಕ ವಿಧಾನಗಳನ್ನೆ ಬಳಸುತ್ತವೆ. ಮಿಲ್ ನಿರೂಪಿಸಿರುವ ವಿಧಾನಗಳು ಸಾದೃಶ್ಯ ಭೇದ ಸಾದೃಶ್ಯ ಮತ್ತು ಭೇದ, ಶೇಷ ಮತ್ತು ಸಹವರ್ತಿ ಪರಿವರ್ತನ. ಲಭ್ಯವಿರುವ ಅಂಕಿ ಅಂಶಾತ್ಮಕ ಮಾದರಿಗಳಿಂದ ಪ್ರಯೋಗದ ನಿರ್ದಿಷ್ಟ ರೂಪರೇಷೆ ನಿರ್ಧಾರವಾಗುತ್ತದೆ. ಕಾರಣ ಪ್ರಾಪ್ತ ಫಲಿತಾಂಶಗಳನ್ನು ಒಪ್ಪಿಕೊಳ್ಳಬೇಕಾದರೆ ಅವನ್ನು ಕೆಲವು ಅಂಕಿ ಅಂಶ ಪ್ರಮಾಣಗಳ ನೆರವಿನಿಂದ ವಿವರಿಸಬೇಕಾಗುತ್ತದೆ. ಸಾಮಾನ್ಯವಾಗಿ ಸಮಸ್ಯೆಯ ಸ್ವಭಾವ ಅಧ್ಯಯನ ವಿಧಾನವನ್ನು ನಿರ್ಧರಿಸುತ್ತದೆಯಾಗಿ ಅಧ್ಯಯನ ಯೋಜನೆಯ ವಿವರಗಳು ಆಯ್ದುಕೊಳ್ಳದ ಪ್ರಯೋಗ ಮಾದರಿಗೆ ಒಳಪಟ್ಟಿರುತ್ತವೆ. ಮನೋವೈಜ್ಞಾನಿಕ ಪ್ರಯೋಗದಲ್ಲಿ ಎರಡು ವಿಧವಾದ ಅನುಪೂರಕ ಮಾದರಿಗಳನ್ನು ಉಪಯೋಗಿಸಲಾಗುತ್ತದೆ. ಒಂದು-ಅವಲಂಬಿ ಪರಿವತ್ರ್ಯವೊಂದರ ಮೇಲೆ ಸ್ವತಂತ್ರ ಪರಿವತ್ರ್ಯವೊಂದರ ಪ್ರಭಾವವೇನು ಎಂಬ ಪ್ರಶ್ನೆಗೆ ಉತ್ತರಿಸುವ ಅವಲಂಬಿ ವಿಶ್ಲೇಷಣ ಮಾದರಿಗಳು, ಎರಡು-ಪರಿವತ್ರ್ಯಗಳ ನಡುವಣ ಸಂಬಂಧದ ಪರಿಮಾಣವೇನು ಎಂಬ ಪ್ರಶ್ನೆಗೆ ಉತ್ತರಿಸುವ ಪರಸ್ವರಾವಲಂಬಿ ವಿಶ್ಲೇಷಣ ಮಾದರಿಗಳು.
	 ಅವಲಂಬಿ ವಿಶ್ಲೇಷಣೆಯ ಮೂಲತತ್ತ್ವದ ಉದ್ದೇಶವೆಂದರೆ `ಜೀಯ ಅನುಕ್ರಿಯೆಗಳನ್ನು ಎರಡು ಉಪಾಧಿಗಳಲ್ಲಿ ಹೋಲಿಸುವುದು. (i) `ಉ ಉದ್ದೀಪನವನ್ನು ಮಾಪಿತ ಪರಿಮಾಣದಿಂದ ಕೊಟ್ಟಾಗ (ಅಂದರೆ, ಪ್ರಾಯೋಗಿಕ ಉಪಾಧಿ) (ii) ಉಳಿದ ಎಲ್ಲ ಕಾರಕಾಂಶಗಳನ್ನೂ ಸ್ಥಿರವಾಗಿರಿಸಿ, ಉದ್ದೀಪನವನ್ನು ಕೊಡದಿದ್ದಾಗ (ಅಂದರೆ, ನಿಯಂತ್ರಿತ ಉಪಾಧಿ) ಉದ್ದೀಪಕ ಪ್ರಭಾವವನ್ನು ಕಂಡು ಹಿಡಿಯಬೇಕಾದರೆ, ಆರಿಸಿಕೊಳ್ಳಲಾಗಿರುವ ಅವಲಂಬಿ ಪರಿವತ್ರ್ಯ ಸೂಕ್ಷ್ಮವೇದಿ ಮತ್ತು ವಿಶ್ವಸನೀಯವಾಗಿರಬೇಕು. ಯಾವುದರ ಮೇಲೆ ಉದ್ದೀಪಕದ ಪ್ರಭಾವ, ಪ್ರಾಕ್ಕಲ್ಪಿತವಾಗಿದೆಯೊ ಅಂಥ, ಚೆನ್ನಾಗಿ ನೆಲೆಗೊಂಡು ಮಾಪನಯೋಗ್ಯವಾಗಿರುವ, ಅನುಕ್ರಿಯೆಯನ್ನು ತೆಗೆದುಕೊಳ್ಳಲಾಗುತ್ತದೆ. ಅಳತೆಗೆ ಸಿಗುವ ದೈಹಿಕ ಪ್ರತಿಕ್ರಿಯೆಗಳು ಅಥವಾ ಕೆಲವು ಕಾರ್ಯನಿರ್ವಹಣ ವೇಗ ಮತ್ತು ನಿಷ್ಕøಷ್ಟತೆಗಳು ಈ ಉದ್ದೇಶವನ್ನು ಪೂರ್ಣಗೊಳಿಸುತ್ತವೆ. ವೀಕ್ಷಣಾಯೋಗ್ಯವಾದ ಯಾವುದೇ ಸೂಚ್ಯಾಂಕಗಳ ಗೈರುಹಾಜರಿಯಲ್ಲಿ, ಪ್ರಯೋಗಾರ್ಥಿಯ ವೈಯಕ್ತಿಕ ಅನುಭವದ ಬಗ್ಗೆ ಆತನ ಹೇಳಿಕೆಯನ್ನು ಅಂತರಾವಲೋಕನ ವರದಿ ಅವಲಂಬಿ ಪರಿವತ್ರ್ಯವೆಂಬುದಾಗಿ ಪರಿಗಣಿಸಲಾಗುತ್ತದೆ. ಒಬ್ಬ ಜೀವಿಯ ಮೇಲೆ ಪ್ರಯೋಗ ನಡೆಸುವುದು ತೀವ್ರವಾದ, ಜೈವಿಕ ಮಾನಸಿಕ ಮತ್ತು ಅಂಕಿ-ಅಂಶಾತ್ಮಕ ಮಿತಿಗಳಿಗೆ ಒಳಪಡುತ್ತದೆ. ಜೀವಿಯ ಮೂಲ ಸ್ವಭಾವ ಪ್ರಾಯೋಗಿಕ ಮತ್ತು ನಿಯಂತ್ರಿತ ಉಪಾಧಿಗಳ ನಡುವೆ ಮಾನಸಿಕವಾಗಿ ಒಂದೇ ರೀತಿಯಲ್ಲಿಲ್ಲದಿರಬಹುದು. ಜೀವಿ ಜೈವಿಕ ವ್ಯವಸ್ಥೆಯಾಗಿರುವುದರಿಂದ ಮುನ್ಸೂಚನೆಗೆ ಸಾಧ್ಯವಾಗದ ತತ್ಕಾಲೀನ ಪರಿವರ್ತನೆಗಳಿಗೆ ಒಳಗಾಗಬಹುದು. ಇನ್ನೂ ನಮ್ಮ ಜ್ಞಾನಕ್ಕೆ ನಿಲುಕಿಲ್ಲದ ಅನೇಕ ಅಂತಸ್ಥ ಕಾರಣಗಳು, ಅನಿಯಂತ್ರಿತವಾಗಿ ಉಳಿದು ಈ ಪರಿವರ್ತನೆಗೆ ನೆರವಾಗುತ್ತವೆ. ಪರಿವರ್ತನಾತ್ಮಕ ದೋಷಗಳು ಎಂಬ ಹೆಸರುಳ್ಳ ಈ ತಾತ್ಕಾಲಿಕ ಪರಿವರ್ತನೆಗಳು ಒಂದು ಸಾಮಾನ್ಯ ಸರಾಸರಿ ವರ್ತನೆಯ ಸುತ್ತ ಉಂಟಾಗುತ್ತವೆ. ಸನ್ನಿವೇಶಗಳ ಸ್ಯಾಂಪಲ್ ಒಂದನ್ನು ತೆಗೆದುಕೊಂಡು ಅವುಗಳ ಮೇಲೆ ಪ್ರಯೋಗವನ್ನು ಪುನರಾರ್ತನೆ ಮಾಡುವುದೂ ದೊರೆತ ಫಲಿತಾಂಶಗಳ ಸರಾಸರಿಯನ್ನು ತೆಗೆದುಕೊಳ್ಳುವುದೂ ಇದಕ್ಕೆ ಇರುವ ಅಂಕಿ ಅಂಶಾತ್ಮಕ ಪರಿಹಾರ. ಇದರಿಂದಾಗಿ ಪ್ರಯೋಗ ಕರ್ತನಿಂದ ಅಥವಾ ಪ್ರಯೋಗ ಪರಿಸರದ ಕ್ರಿಯೆಯಿಂದ ಉಂಟಾಗುವ ಆಕಸ್ಮಿಕ ದೋಷಗಳೂ ಬಹು ಕಡಿಮೆಯಾಗುತ್ತವೆ. ಹೀಗಿದ್ದರೂ ಮೇಲೆ ವಿವರಿಸಿದಂಥ ಮಾದರಿಯೊಂದರಿಂದ ಪ್ರಾಪ್ತವಾದ ಫಲಿತಾಂಶಗಳು ಎಲ್ಲ ಜೀವಿಗಳಿಗೂ ಅನ್ವಯಿಸುತ್ತವೆ ಎಂಬ ಸಾಮಾನ್ಯೀಕರಣ ಮಾಡಲು ಸಾಧ್ಯವಿಲ್ಲ. ಕಾರಣ. ದೊರೆತಿರುವ ಫಲಿತಾಂಶ ಆ ಜೀವಿಯ ನಿರ್ದಿಷ್ಟವಾದ (ವೈಯಕ್ತಿಕ) ದೈಹಿಕ ಮಾನಸಿಕ ರಚನೆಗೆ ಸಂಬಂಧಿಸಿದುದಿರಬಹುದು. ಸಾಮಾನ್ಯವಾಗಿ ಅನ್ವಯಿಸುವ ನಿಯಮಗಳನ್ನು ಕಂಡುಹಿಡಿಯುವುದರಲ್ಲಿ ನಮ್ಮ ಆಸಕ್ತಿ ಇದ್ದರೆ ಆಗ ಜೀವಿಯಲ್ಲಿ ಆಗುವ ಪರಿವರ್ತನೆಗಳು ನಮ್ಮ ಪ್ರಯೋಗ ಮಾದರಿಯಲ್ಲಿ ಪ್ರವೇಶಿಸಲು ಅವಕಾಶ ಕಲ್ಪಿಸಬೇಕಾಗುತ್ತದೆ. ಈ ರೀತಿ ಪರಿಷ್ಕøತವಾದ ಮಾದರಿಯಲ್ಲಿ ಪ್ರಯೋಗವನ್ನು ಅನೇಕ ಜೀವಿಗಳ ಮೇಲೆ ಪುನರಾವರ್ತಿಸಲಾಗುತ್ತದೆಯಲ್ಲದೆ ಈ ಎರಡು ಉಪಾಧಿಗಳಲ್ಲಿ ದೊರತ ಸರಾಸರಿ ಪ್ರಾಪ್ತಾಂಕಗಳನ್ನು ಹೋಲಿಸಲಾಗುತ್ತದೆ. ಸ್ವತಂತ್ರ ಪರಿವತ್ರ್ಯಗಳ ಪ್ರಭಾವದಿಂದ ಈ ಎರಡು ಉಪಾಧಿಗಳ ನಡುವೆ ನಿರೀಕ್ಷಿತ ವ್ಯತ್ಯಾಸಗಳಿದ್ದರೆ, ಅವನ್ನು ಒಪ್ಪಿಕೊಳ್ಳುವ ಮೊದಲು ಕಂಡುಹಿಡಿಯಲಾದ ವಿಷಯ ಕೇವಲ ಆಕಸ್ಮಿಕ ಕಾರಣಗಳಿಂದ ಉಂಟಾಗಿಲ್ಲವೆಂಬುದನ್ನು ಸಿದ್ದಪಡಿಸಲು, ಆ ವ್ಯತ್ಯಾಸಗಳನ್ನು ಅಂಕಿ ಅಂಶಾತ್ಮಕವಾಗಿ ಪರಿಶೀಲಿಸಬೇಕಾಗುತ್ತದೆ. ವಿಮರ್ಶಾತ್ಮಕ ಪ್ರಮಾಣ `ಟಿ ಪರೀಕ್ಷೆ ಮತ್ತು `ಎಫ್ ಪರೀಕ್ಷೆಗಳಂಥ ಅಂಕಿ ಅಂಶಾತ್ಮಕ ಪರೀಕ್ಷೆಗಳು ಈ ಉದ್ದೇಶಕ್ಕೆ ಉಪಯುಕ್ತವಾಗಿವೆ. ಒಂದೇ ಗುಂಪನ್ನು ಪ್ರಾಯೋಗಿಕ ಹಾಗೂ ನಿಯಂತ್ರಿತ ಉಪಾಧಿಗಳೆರಡರಲ್ಲೂ ಉಪಯೋಗಿಸುವುದು ಸೂಕ್ತವಲ್ಲವೆಂದು ಎಲ್ಲಿ ತೋರುತ್ತದೆಯೊ ಅಲ್ಲಿ ಸರಿಜೋಡಿಯಾದ ಎರಡು ಗುಂಪುಗಳನ್ನು ಉಪಯೋಗಿಸಬಹುದು. ಇದರಲ್ಲಿ ಆದರ್ಶ ಸ್ಥಿತಿಯೆಂದರೆ ಸರಿಸಮಾನವಾದ ಶಿಕ್ಷಣಪಡೆದ ಮತ್ತು ಒಂದೇ ಕೌಟುಂಬಿಕ ಪರಿಸರದಲ್ಲಿ ಬೆಳೆದ ಅನನ್ಯ ಅವಳಿಜವಳಿಗಳನ್ನು ಉಪಯೋಗಿಸುವುದು. ಮಾನವ ಪ್ರಯೋಗಾರ್ಥಿಗಳಲ್ಲಿ ಸರಿಜೋಡಿಯನ್ನು ಮಾಡುವ ಕಾರ್ಯದಲ್ಲಿ ನೆರವಾಗುವ ಕೆಲವು ಸಾಮಾನ್ಯ ಪರಿವತ್ರ್ಯಗಳೆಂದರೆ, ವಯಸ್ಸು ಲಿಂಗ ವಿದ್ಯಾಭ್ಯಾಸದ ಮಟ್ಟ ಬುದ್ಧಿಶಕ್ತಿ ಇತ್ಯಾದಿ, ಅಲ್ಲದೆ ಕೆಲವು ವೇಳೆ ಅವಲಂಬಿ ಪರಿವತ್ರ್ಯ ಕೂಡ. ಪರಿಗಣಿಸಲ್ಪಟ್ಟ ಸಮಂಜಸವಾದ ಪರಿವತ್ರ್ಯಗಳ ಸಂಖ್ಯೆ ಹೆಚ್ಚಾಗಿದ್ದಷ್ಟೂ ಸರಿಜೋಡಿ ಮಾಡುವ ಕಾರ್ಯ ಹೆಚ್ಚು ಉತ್ತಮವಾಗಿರುತ್ತದೆ. ಇಲಿಗಳಲ್ಲಿ ಜೀವಾತ್ಮವಾಗಿ ಸಮರೂಪವಾಗಿರುವವನ್ನು ಉಪಯೋಗಿಸಲಾಗುತ್ತದೆ. ಸ್ವತಂತ್ರ ಪರಿವತ್ರ್ಯಗಳ ಪ್ರಭಾವವನ್ನು ಒಂಟಿಯಾಗಿ ಅಥವಾ ಜೊತೆಯಾಗಿ ಅಧ್ಯಯನ ಮಾಡಲು ಒಂದಕ್ಕಿಂತ ಹೆಚ್ಚು ಸ್ವತಂತ್ರ ಪರಿವತ್ರ್ಯಗಳನ್ನು ಒಳಗೊಳ್ಳುವಂತೆ ಅವಲಂಬಿ ವಿಶ್ಲೇಷಣೆಯ ಜಟಿಲತೆಯನ್ನು ಹೆಚ್ಚಿಸಬಹುದು.
	ಅವಲಂಬಿ ವಿಶ್ಲೇಷಣೆಗೆ ವ್ಯತಿರಿಕ್ತವಾಗಿ, ಪ್ರಸಕ್ತ ಪರಿವತ್ರ್ಯಗಳಲ್ಲಿ ಯಾವುದು ಕಾರಣ ಮತ್ತು ಯಾವುದು ಕಾರ್ಯ (ಪರಿಣಾಮ) ಎಂಬುದನ್ನು ಪರಿಗಣಿಸದೆ ಯಾವ ಪರಿವತ್ರ್ಯ ಮತ್ತಾವ ಪರಿವತ್ರ್ಯದೊಂದಿಗೆ ಅಧಿಕ ಪ್ರಮಾಣದ ಸಹಸಂಬಂಧವನ್ನು ಹೊಂದಿದೆ ಎಂಬುದನ್ನು ಕಂಡುಹಿಡಿಯಲು ಉಪಯೋಗಿಸಲಾಗುವ ತಂತ್ರ, ವಿಧಾನ, ಪರಸ್ಪರಾವಲಂಬಿ ವಿಶ್ಲೇಷಣೆ. ಮಿತಸಂದರ್ಭಗಳಲ್ಲಿ ಕಾರಣ-ಪರಿಣಾಮಸಂಬಂಧವನ್ನು ತಿಳಿಯಲು ಆ ವಿಧಾನವನ್ನು ನಿಯೋಜಿಸಿಕೊಳ್ಳಬಹುದು. ಮಾನವ ವರ್ತನೆಗೆ ಸಂಬಂಧಿಸಿದ ಪ್ರಯೋಗಗಳು ಒಂದು ವಿಚಿತ್ರವಾದ ಸಂಕಷ್ಟದಿಂದ ಆಕ್ರಮಿಸಲ್ಪಟ್ಟಿವೆ. ಪರಿವತ್ರ್ಯಗಳನ್ನು ಅಳೆಯಲು ಅಥವಾ ಅವುಗಳ ಪ್ರಭಾವವನ್ನು ಪರಿಶೀಲನೆ ಮಾಡಲು ಅವನ್ನು ಇತರ ಪರಿವತ್ರ್ಯಗಳ ಪ್ರಭಾವದಿಂದ ಬೇರ್ಪಡಿಸಲಾಗುವುದಿಲ್ಲ. ಇದರಿಂದಾಗಿ ಆ ಪರಿವತ್ರ್ಯಗಳನ್ನು ಇತರ ಪರಿವತ್ರ್ಯಗಳೊಡನೆ ಅವುಗಳಿರುವ ಸಂಬಂಧದ ಸ್ವಾಭಾವಿಕ ಮಾತೃಕೆಯಲ್ಲಿ ಪರಿಶೋಧಿಸಬೇಕಾಗುತ್ತದೆ. ಪಾಶ್ರ್ವ-ಸಹ ಸಂಬಂಧ ಮತ್ತು ಕಾರಕಾಂಶ ವಿಶ್ಲೇಷಣೆಗಳಂಥ ಸಹಸಂಬಂಧ ವಿಶ್ಲೇಷಣ ವಿಧಾನಗಳಿಂದ ಅಂಕಿ-ಅಂಶಾತ್ಮಕವಾಗಿ ಇತರ ಪರಿವತ್ರ್ಯಗಳ ಪ್ರಭಾವವನ್ನು ಆಮೇಲೆ ತೆಗೆದುಹಾಕಲಾಗುತ್ತದೆ.
	ಮೇಲೆ ನಿರೂಪಿಸಿಲಾದ ತಂತ್ರವಿಧಾನಗಳಿಂದ ಶಸ್ತ್ರಸಜ್ಜಿತರಾಗಿ ಪ್ರಾಯೋಗಿಕ ಮನೋವಿಜ್ಞಾನಿಗಳು ಕೆಳಗೆ ಹೆಸರಿಸಿರುವ ವರ್ತನಾಕ್ಷೇತ್ರಗಳ ಪರಿಶೋಧನೆಯಲ್ಲಿ ತೊಡಗಿದ್ದಾರೆ. ಅವು ಸಂವೇದನಾಕ್ರಿಯೆಗಳು, ಸಂಜ್ಞಾನ, ಪ್ರೇರಣೆ, ಭಾವನಾನುಭವ ಮತ್ತು ಸಂವೇಗ ಕಲಿಕೆ. ಅಲೋಚನಾ ಕ್ರಿಯೆ ಮತ್ತು ಭಾಷವರ್ತನೆ, ಅವಧಾನ ಮತ್ತು ಕೆಲಸ-ಇತ್ಯಾದಿಗಳು. ಘಟನೆಗಳನ್ನು ಮುನ್ಸೂಚಕ ಸಮೀಕರಣರೂಪದಲ್ಲಿ ವ್ಯಕ್ತಪಡಿಸಬೇಕೆಂಬ ಪರಮೋದ್ದೇಶ ಮೇಲೆ ಹೇಳಲಾದ ಎಲ್ಲ ಕ್ಷೇತ್ರಗಳಲ್ಲೂ ಅಷ್ಟೇ ಮಟ್ಟದಲ್ಲಿ ಪೂರ್ಣವಾಗಿರುವಂತೆ ಕಂಡುಬರುವುದಿಲ್ಲ. ಸಂವೇದನಾ ಪ್ರಕ್ರಿಯೆಗಳು ಮತ್ತು ಕಲಿಕೆ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆಯಾಗಿರುವುದು ಕಂಡುಬರುತ್ತದೆ. ಕಾರ್ಯಾತ್ಮಕ ವಿಶ್ಲೇಷಣೆಗೆ ಸುಲಭವಾಗಿ ಸಿಗುವ ಭೇದ ಗ್ರಾಹಕ ಮತ್ತು ಆರ್ಜನೆಗಳಂಥ ಸಾಪೇಕ್ಷವಾಗಿ ಸರಳಕ್ರಿಯೆಗಳೆ ಅದಕ್ಕೆ ಕಾರಣವಿರಬಹುದು. ಸಮಸ್ಯೆಗಳ ಅಸಾಧಾರಣ ಸ್ವಭಾವದ ಪ್ರಯುಕ್ತ, ಮಿಕ್ಕ ಕ್ಷೇತ್ರಗಳಲ್ಲಿ ಮೇಲೆ ಹೇಳಲಾದ ಉದ್ದೇಶದತ್ತ ಆಗಿರುವ ಪ್ರಗತಿ ತೃಪ್ತಿಕರವಾಗಿಲ್ಲ. ಹೀಗಿದ್ದರೂ ಸಮಗ್ರದೃಷ್ಟಿಯಿಂದ ಬೆಲೆಕಟ್ಟುವುದಾದರೆ ನೂರು ವರ್ಷಗಳ ಪ್ರಾಯೋಗಿಕ ಮನೋವಿಜ್ಞಾನವನ್ನು ಹೆಚ್ಚು ವಾಸ್ತವಿಕವನ್ನಾಗಿಯೂ ವರ್ಣನಾತ್ಮಕವಾಗಿದ್ದುದನ್ನು ವಿವರಣಾತ್ಮಕವಾಗಿಯೂ ಮಾಡಿದೆ. ವರ್ಣನಾತ್ಮಕ ಮನೋವಿಜ್ಞಾನದ ಇತರ ಶಾಖೆಗಳಿಗೂ ಈ ವಿಧಾನ ವ್ಯಾಪಿಸಿರುವುದರಿಂದ ಇದರ ಉಪಯುಕ್ತತೆಯನ್ನು ಇನ್ನೂ ಹೆಚ್ಚು ತಿಳಿಯಲು ಸಾಧ್ಯವಾಗಿದೆ. ಉದಾಹರಣೆಗೆ ಇಂದು ನಮ್ಮ ಕಣ್ಣಿಗೆ ಬೀಳುವ ನೂತನ ಶಿರೋನಾಮಗಳೇ ನಿದರ್ಶನಗಳು, ಪ್ರಾಯೋಗಿಕ ವಿಕೃತಿ ಮನೋವಿಜ್ಞಾನ, ಪ್ರಾಯೋಗಿಕ ಔದ್ಯಮಿಕ ಮನೋವಿಜ್ಞಾನ (ಮಾನವ ಎಂಜನೀಯರಿಂಗ್) ಈ ಹೊಸ ಶಿರೋನಾಮಗಳು ಪ್ರಾಯೋಗಿಕ ಮಾರ್ಗ ಹೇಗೆ ಮನೋವಿಜ್ಞಾನದ ಎಲ್ಲ ಕ್ಷೇತ್ರಗಳಲ್ಲೂ ಪ್ರಸರಿಸಿದೆ ಎಂಬುದನ್ನು ವಿಶದೀಕರಿಸುತ್ತವೆ.
(ಪಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ